ಕನ್ನಡ ನಾಡು | Kannada Naadu

ಅಕ್ವಾ ಪಾರ್ಕ್‍ಗಳ ನಿರ್ಮಾಣಕ್ಕೆ ಕ್ರಮ  - ಸಚಿವ ಮಂಕಾಳ ಎಸ್. ವೈದ್ಯ

12 Mar, 2025

 

ಬೆಂಗಳೂರು  :

ರಾಜ್ಯದಲ್ಲಿ ಅಕ್ವಾ ಪಾರ್ಕ್‍ಗಳ ನಿರ್ಮಾಣ ಮಾಡಲು ಕ್ರಮ ವಹಿಸಲಾಗುವುದು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಮಂಕಾಳ ಎಸ್. ವೈದ್ಯ ಅವರು ತಿಳಿಸಿದರು.
 
ಇಂದು ವಿಧಾನ ಪರಿಷತ್ತಿನ ಕಲಾಪದ ವೇಳೆ ವಿಧಾನ ಪರಿಷತ್ ಸದಸ್ಯ ಎಂ ನಾಗರಾಜು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಆಯವ್ಯಯದಲ್ಲಿ ಅಕ್ವಾ ಪಾರ್ಕ್ ಸ್ಥಾಪನೆ ಮಾಡಲು ಉದ್ದೇಶಿಸಿದೆ. ಕೇಂದ್ರ ಸರ್ಕಾರಕ್ಕೆ ವಿಸ್ತøತ ಯೋಜನಾ ವರದಿ ತಯಾರಿಸಿ ಸಲ್ಲಿಸಲು ಕ್ರಮವಹಿಸಲಾಗುತ್ತಿದೆ. 2024-25ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ 58 ರಲ್ಲಿ ಭಟ್ಕಳ ತಾಲ್ಲೂಕಿನ ಮುರುಡೇಶ್ವರದಲ್ಲಿ ಸುಸಜ್ಜಿತ ಮೀನುಗಾರಿಕೆ ಹೊರ ಬಂದರು ನಿರ್ಮಾಣ ಮಾಡಲಾಗುವುದೆಂದು ಘೋಷಿಸಲಾಗಿದೆ. ಈ ಯೋಜನೆಯನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ತಿಳಿಸಿದರು.
 
ಮೀನುಗಾರಿಕೆ ಸಂಶೋಧನಾ ಕೇಂದ್ರ ಸ್ಥಾಪನೆಗೆ ಹೊನ್ನಾವರ ತಾಲ್ಲೂಕಿನ ಮಂಕಿ / ಕಾಸರಕೋಡದಲ್ಲಿ ಜಾಗದ ಲಭ್ಯತೆ ಇಲ್ಲದ ಕಾರಣ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 9.36 ಎಕರೆ ಜಾಗ ಗುರುತಿಸಿ ಸರ್ವೇ ಕಾರ್ಯ ನಡೆಸಲಾಗಿದ್ದು, ಜಾಗವನ್ನು ಮೀನುಗಾರಿಕೆ ಇಲಾಖೆಗೆ ಹಸ್ತಾಂತರ ಮಾಡಿಕೊಳ್ಳುವ ಪ್ರಕ್ರಿಯೆ ಜಾರಿಯಲ್ಲಿರುತ್ತದೆ.
 
ಕೇಂದ್ರ ಪುರಸ್ಕøತ ಪಿ.ಎಂ.ಎಂ.ಎಸ್.ವೈ ಯೋಜನೆಯಡಿ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನಲ್ಲಿ   ರೂ. 27.00 ಕೋಟಿಗಳ ಒಟ್ಟು ಯೋಜನಾ ವೆಚ್ಚದಲ್ಲಿ ಸುಸಜ್ಜಿತ ಅತ್ಯಾದುನಿಕ ಮೀನು ಮಾರುಕಟ್ಟೆ ಸ್ಥಾಪನೆ ಮಾಡಲು ವಿಸ್ತøತವಾದ ಯೋಜನಾ ವರದಿಯನ್ನು ತಯಾರಿಸಿ ಮಾರುಕಟ್ಟೆ ನಕ್ಷೆಯೊಂದಿಗೆ ಕೇಂದ್ರ ಸರ್ಕಾರದ ಅನುಮೋದನೆಗಾಗಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿರುತ್ತದೆ. ಅನುಮೋದನೆ ನಿರೀಕ್ಷೆಯಲ್ಲಿದೆ.
ವಿಜಯಪುರದ ಆಲಮಟ್ಟಿಯಲ್ಲಿ ಒಳನಾಡು ಮೀನುಗಾರಿಕೆ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆಗೆ 10 ಎಕರೆ ಜಾಗದ ಅವಶ್ಯಕತೆ ಇದ್ದು, ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತರವರಿಂದ ಜಾಗ ಹಸ್ತಾಂತರ ಮಾಡಿಕೊಳ್ಳುವ ಪ್ರಕ್ರಿಯೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದರು.

Publisher: ಕನ್ನಡ ನಾಡು | Kannada Naadu

Login to Give your comment
Powered by